Hydroponics Soilless Farming ಹೈಡ್ರೋಫೋನಿಕ್ಸ್ ಕೃಷಿ ವಿಧಾನ: ಅರ್ಧ ಎಕರೆಯಲ್ಲಿ ಲಕ್ಷ ಲಕ್ಷ ಆದಾಯ

WhatsApp Group Join Now
Telegram Group Join Now
Spread the love

Hydroponics Soilless Farming : ಇದು ಮಣ್ಣಿಲ್ಲದೇ ಕೃಷಿ ಮಾಡಿ ಅಧಿಕ ಆದಾಯ ಗಳಿಸುವ ಹೊಸ ವಿಧಾನದ ಬೇಸಾಯ ಪದ್ಧತಿ. ಇಲ್ಲಿ ಭೂಮಿ ಹದ ಮಾಡುವ ಅಗತ್ಯವಿಲ್ಲ. ಕಳೆ ಕೀಳುವ, ರಾಸಾಯನಿಕ ಸಿಂಪಡಿಸುವ ಗೊಡವೆ ಇಲ್ಲ. ಹೆಚ್ಚಿನ ಪ್ರಮಾಣದ ಕೂಲಿ ಆಳುಗಳು ಕೂಡ ಬೇಕಿಲ್ಲ. ಆದರೂ ಕೇವಲ ಅರ್ಧ ಎಕರೆ ಪ್ರದೇಶದಲ್ಲಿ ಅತ್ಯಧಿಕ ಆದಾಯ ಗಳಿಸಬಹುದು. ಏನಿದು ಹೊಸ ಮಾದರಿ ಕೃಷಿ? ಇದರ ತರಬೇತಿ ಪಡೆಯುವುದು ಹೇಗೆ? ಈ ಕೃಷಿ ಮಾಡುವ ವಿಧಾನ ಹೇಗೆ? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ…

ಕೃಷಿಗೆ ಮಣ್ಣೆ ಜೀವಾಳ. ಆದರೆ ಈ ಹೊಸ ಮಾದರಿಯ ಕೃಷಿಗೆ ಮಣ್ಣು ಬೇಡವೇ ಬೇಡ. ಮಣ್ಣಿಲ್ಲದೇ ಕೃಷಿ ಮಾಡಿ ಅಧಿಕ ಆದಾಯ ಗಳಿಸಬಹುದು. ಮಣ್ಣು ರಹಿತ ಕೃಷಿಯಲ್ಲಿ ಭೂಮಿಯನ್ನು ಹದ ಮಾಡುವ ಅಗತ್ಯವಿಲ್ಲ. ಕಳೆ ಕೀಳುವ, ರಾಸಾಯನಿಕ ಸಿಂಪಡಿಸುವ ಗೊಡವೆ ಇರದು. ಹೆಚ್ಚಿನ ಪ್ರಮಾಣದ ಕೂಲಿ ಆಳುಗಳು ಬೇಕಿಲ್ಲ. ಕುಟುಂಬದ ಒಂದಿಬ್ಬರು ಸದಸ್ಯರು ಆರಾಮವಾಗಿ ಎಲ್ಲ ಕೆಲಸ ಕೈಗೊಳ್ಳಬಹುದು.

ಇಲ್ಲಿ ಅತಿವೃಷ್ಟಿ, ಅನಾವೃಷ್ಟಿ, ನೆರೆ-ಬರದ ಸಮಸ್ಯೆ ಇಲ್ಲವಾದ್ದರಿಂದ ಮಾಮೂಲು ಕೃಷಿಗಿಂತ ಏಳೆಂಟು ಪಟ್ಟು ಹೆಚ್ಚಿಗೆ ಇಳುವರಿ ಗ್ಯಾರಂಟಿ ಮತ್ತು ಅತ್ಯಧಿಕ ಲಾಭ ಕೈಸೇರುತ್ತದೆ. ಹಾಕಿದ ಬಂಡವಾಳದ ಜತೆಗೆ ಐದು ಪಟ್ಟು ಆದಾಯ ಖಾತ್ರಿ ಇರುವುದರಿಂದ ನಷ್ಟವೆಂಬ ಮಾತೇ ಇಲ್ಲ. ಆದರೆ ಈ ಪದ್ಧತಿಯ ಕೃಷಿ ಕೈಗೊಳ್ಳಲು ಬೇಕಾದ ಪರಿಕರಕ್ಕೆ ಒಂದೇ ಬಾರಿ ಹೆಚ್ಚು ಬಂಡವಾಳ ಹೂಡಬೇಕು. ಈ ಮೂಲ ಬಂಡವಾಳವೊAದಿದ್ದರೆ ಕೇವಲ ಅರ್ಧ ಎಕರೆ ಪ್ರದೇಶದಿಂದ ಈ ಕೃಷಿ ಆರಂಭಿಸಬಹುದು. ಲಕ್ಷ ಲಕ್ಷ ಆದಾಯ ಗಳಿಸಬಹುದು.

ಇದು ಹೈಡ್ರೋಪೋನಿಕ್ಸ್ ತಂತ್ರಜ್ಞಾನ

ಹೈಡ್ರೋಪೋನಿಕ್ಸ್ ತಂತ್ರಜ್ಞಾನವೆ೦ದು ಕರೆಯಲ್ಪಡುವ ಈ ವಿಧಾನವನ್ನು 1940ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ವ್ಯವಸ್ಥೆಯಲ್ಲಿ ಬೆಳೆಯುವ ಬೆಳೆಗಳಿಗೆ ಬೇಕಾಗುವ ಪೊಷಕಾಂಶ ದ್ರಾವಣವನ್ನು ಅಭಿವೃದ್ಧಿಪಡಿಸಿದರು. ನಂತರ 1960 ಮತ್ತು 70ರ ದಶಕದಲ್ಲಿ ಅರಿಝೋನಾ, ಅಬುಧಾಬಿ, ಬೆಲ್ಜಿಯಂ, ಕ್ಯಾಲಿಫೋರ್ನಿಯಾ, ಡೆನ್ಮಾರ್ಕ್, ಜರ್ಮನ್, ಹಾಲೆಂಡ್, ಇರಾನ್, ಇಟಲಿ, ಜಪಾನ್, ರಷ್ಯಾದ ಒಕ್ಕೂಟ ಮತ್ತು ಇತರ ದೇಶಗಳಲ್ಲಿ ದೊಡ್ಡ ಪ್ರಮಾಣದ ವಾಣಿಜ್ಯ ಹೈಡ್ರೋಪೋನಿಕ್ಸ್ ಫಾರ್ಮ್ಗಳು ತಲೆ ಎತ್ತಿದವು. ಪ್ರಸ್ತುತ ಸನ್ನಿವೇಶದಲ್ಲಿ ಹೈಡ್ರೋಪೋನಿಕ್ಸ್’ನಂತಹ ಮಣ್ಣಿನ ರಹಿತ ಕೃಷಿಯ (Soilless Farming) ತಂತ್ರಜ್ಞಾನಗಳು ಆರೋಗ್ಯಕರ ಆಹಾರ ಬೆಳೆಯಲು ಯಶಸ್ವಿ ಮತ್ತು ಪರ್ಯಾಯ ಆಯ್ಕೆಗಳು ಎಂದು ಪರಿಗಣಿಸಲಾಗಿದೆ.

ಮಣ್ಣು ರಹಿತ ಕೃಷಿಯಲ್ಲಿ ಹೈಡ್ರೋಪೋನಿಕ್ಸ್ (Hydroponics), ಅಕ್ವಾಪೋನಿಕ್ಸ್ (Aquaponics) ಮತ್ತು ಏರೋಪೋನಿಕ್ಸ್ (Aeroponics) ಎಂಬ ಹಲವಾರು ವಿಧಗಳಿವೆ. ಇವುಗಳಲ್ಲಿ ಹೈಡ್ರೋಪೋನಿಕ್ಸ್ ತಂತ್ರಜ್ಞಾನವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ವಿಧಾನದಲ್ಲಿ ಸಂಪನ್ಮೂಲಗಳು ಸಮರ್ಥ ನಿರ್ವಹಣೆ ಮತ್ತು ಆಹಾರದ ಉತ್ಪಾದನೆ ಮಾಡಬಹುದಾಗಿದೆ. ಈ ವಿಧಾನದಲ್ಲಿ ವಿವಿಧ ವಾಣಿಜ್ಯ ಮತ್ತು ವಿಶೇಷ ಬೆಳೆಗಳನ್ನು ಬೆಳೆಯಬಹುದಾಗಿದೆ. ಎಲೆಗಳ ತರಕಾರಿ, ಟೊಮೆಟೊ, ಸೌತೆಕಾಯಿ, ಮೆಣಸು, ಸ್ಟಾçಬೆರಿ ಸೇರಿದಂತೆ ಅನೇಕ ಬೆಳೆಗಳನ್ನು ಹೈಡ್ರೋಪೋನಿಕ್ಸ್ ತಂತ್ರಜ್ಞಾನದಲ್ಲಿ ಬೆಳೆಯಬಹುದಾಗಿದೆ.

ಹೈಡ್ರೋಪೋನಿಕ್ಸ್ ತಂತ್ರಜ್ಞಾನ (Hydroponics Technology) ಬಳಸಿಕೊಂಡು ನೀರಿನ ಲಭ್ಯತೆ ಕಡಿಮೆ ಇರುವ ಜಾಗದಲ್ಲಿ, ಸಮಸ್ಯಾತ್ಮಕ ಮಣ್ಣು ಇರುವ ಪ್ರದೇಶಗಳಲ್ಲಿ, ಕೃಷಿಗೆ ಯೊಗ್ಯವಲ್ಲದ ಭೂಮಿಯಲ್ಲಿ, ಅತಿ ಕಡಿಮೆ ಹಿಡುವಳಿದಾರು ಹೆಚ್ಚು ಲಾಭ ಪಡೆಯಲು, ವಾತಾವರಣ ಏರುಪೆರು ಹೆಚ್ಚು ಇರುವ ಪ್ರದೇಶದಲ್ಲಿ, ಪಟ್ಟಣ ಪ್ರದೇಶದಲ್ಲಿ ಮನೆಯ ತಾರಸಿ, ಬಾಲ್ಕನಿಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆದು ಲಾಭ ಗಳಿಸಬಹುದು.

ಹೈಡ್ರೋಪೋನಿಕ್ ವ್ಯವಸ್ಥೆಯ ವಿವಿಧ ರಚನೆಗಳು
1. ಮೀನು ಆಧಾರಿತ ಜಲಕೃಷಿ Aquaponics (ಆಳ ನೀರಿನ ಪದ್ಧತಿ Deep water Culture)

ಅಕ್ವಾಪೋನಿಕ್ಸ್ ವಿಧಾನವು ಜಲಚರ ಪ್ರಾಣಿಗಳನ್ನು ಬೆಳೆಸಲು ಜಲಕೃಷಿ ಭಾಗ ಮತ್ತು ಸಸ್ಯಗಳನ್ನು ಬೆಳೆಸಲು ಹೈಡ್ರೋಪೋನಿಕ್ಸ್ ಭಾಗವೆಂಬ ಎರಡು ಮುಖ್ಯ ಭಾಗಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯಲ್ಲಿ ಜಲಕೃಷಿ ಭಾಗದಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾದಂತ ಪೊಷಕಾಂಶಯುಕ್ತ ನೀರನ್ನು ಆಳನೀರಿನ ಪದ್ಧತಿಯಲ್ಲಿ ಸಸ್ಯಗಳನ್ನು ಬೆಳೆಸಲು ಒದಗಿಸಲಾತ್ತದೆ. ಈ ವ್ಯವಸ್ಥೆಯಲ್ಲಿ ನೀರಿನ ಪೋಷಕಾಂಶ ಪ್ರಮಾಣ, ಆಮ್ಲಜನಕ, ಲವಣಾಂಶ ಮತ್ತು ರಸಸಾರ ಇವುಗಳ ಅನುಪಾತ ಪ್ರಮುಖವಾಗಿರುತ್ತದೆ. ಈ ವ್ಯವಸ್ಥೆಯಲ್ಲಿ ವಿಶೇಷವಾಗಿ ಹಣ್ಣುಗಳನ್ನು ಉತ್ಪಾದಿಸುವ ದೊಡ್ಡ ಸಸ್ಯಗಳಿಗೆ, ಸೌತೆಕಾಯಿ, ಟೊಮೆಟೊ ಮತ್ತು ಸೊಪ್ಪು ತರಕಾರಿಗಳು ಚೆನ್ನಾಗಿ ಬೆಳೆಯುತ್ತವೆ.

2. ಡಚ್ ಬಕೆಟ್ ವ್ಯವಸ್ಥೆ (Dutch bucket system)

ಇದು ಮನೆಗಳಲ್ಲಿ ಮತ್ತು ವಾಣಿಜ್ಯ ಬೆಳೆಗಾರರು ಹೆಚ್ಚಾಗಿ ಅಳವಡಿಸಿಕೊಳ್ಳುವ ಪದ್ಧತಿಯಾಗಿದೆ. ಇದರಲ್ಲಿ ಪ್ರತಿಯೊಂದು ಗಿಡಕ್ಕೂ ಬೇಕಾಗುವ ಪೋಷಕಾಂಶ ದ್ರಾವಣವನ್ನು ಪಂಪಿನ ಮೂಲಕ ಹನಿ ಹನಿಯಾಗಿ ಬೇರಿಗೆ ಸಿಗುವ ಹಾಗೆ ನೋಡಿಕೊಳ್ಳಲಾಗುವುದು. ಹೀಗೆ ವಿವಿಧ ಬೆಳೆಗಳನ್ನು ನೀರಿನ ಸದ್ಭಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಬೆಳೆಯಬಹುದು. ಈ ವ್ಯವಸ್ಥೆಯಲ್ಲಿ ಟೊಮೆಟೊ, ಕ್ಯಾಪ್ಸಿಕಮ್ ಮತ್ತು ಇತರೆ ತರಕಾರಿ ಬೆಳೆಗಳನ್ನು ಬೆಳೆಯಬಹುದಾಗಿದೆ.

3. ನೀರು ಹರಿಸಿ ತಗ್ಗಿಸುವ ವಿಧಾನ (Ebb and Flow method)

ಈ ವ್ಯವಸ್ಥೆಯು ಮೊದಲ ಲಾಭದಾಯಕ ಹೈಡ್ರೋಪೋನಿಕ್ ವ್ಯವಸ್ಥೆಯಾಗಿದ್ದು ನೀರನ್ನು ಹರಿಸುವ ಮತ್ತು ಬರಿದಾಗಿಸುವ ತತ್ವದಿಂದ ಕೆಲಸ ನಿರ್ವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ಪೋಷಕಾಂಶ ದ್ರಾವಣವನ್ನು ಪಂಪಿನ ಮೂಲಕ ಒಂದು ಹಂತದವರೆಗೆ ಹರಿಸಲಾಗುವುದು. ನಂತರ ಅಲ್ಲಿಯೇ ಕೆಲವು ಸಮಯದವರೆಗೆ ಬಿಟ್ಟು ನಂತರ ಪೊಷಕಾಂಶವನ್ನು ಬಸಿಯಲಾಗುವುದು. ಹೀಗೆ ಪುನರಾವರ್ತಿತವಾಗಿ ಪೊಷಕಾಂಶವನ್ನು ಹರಿಸಿ ಮತ್ತು ಬಸಿಯುವಾಗ ಸಸ್ಯಗಳಿಗೆ ಪೊಷಕಾಂಶ ದೊರಕುತ್ತದೆ. ಈ ವ್ಯವಸ್ಥೆಯಲ್ಲಿ ಸೊಪ್ಪು ತರಕಾರಿಗಳು, ಅಲಂಕಾರಿಕ ಗಿಡಗಳು, ಔಷಧಿ ಗಿಡಗಳು ಮತ್ತು ಇತರೆ ಬೆಳೆಗಳನ್ನು ಬೆಳೆಯಬಹುದಾಗಿದೆ.

4. ನ್ಯೂಟ್ರಿಯಂಟ್ ಫಿಲ್ಮ್ ಪದ್ಧತಿ (Nutrient film technique-NFT)

ಎನ್‌ಎಫ್‌ಟಿ ಅನ್ನು 1960ರ ದಶಕದಲ್ಲಿ ಇಂಗ್ಲೆ೦ಡ್ ಮೂಲದ ಡಾ. ಅಲೆನ್ ಕೂಪರ್ ಎಂಬುವವರು ಅಭಿವೃದ್ಧಿಪಡಿಸಿದರು. ಈ ಪದ್ಧತಿಯಲ್ಲಿ ಪೊಷಕಾಂಶದ ದ್ರಾವಣವು ಬೇರುಗಳ ಮೂಲಕ ಸಾಗುವಂತೆ ಸ್ವಲ್ಪ ಓರೆಯಾಗಿರುವ ಕೊಳವೆಗಳಲ್ಲಿ ಪುನರಾವರ್ತಿತವಾಗಿ ಹರಿಯುತ್ತದೆ. ಈ ರೀತಿಯಾಗಿ ಪುನರಾವರ್ತಿತವಾಗುವ ದ್ರಾವಣದಲ್ಲಿರುವ ಪೊಷಕಾಂಶಗಳನ್ನು ಕೊಳವೆಗಳಲ್ಲಿ ಇರಿಸಿದ ಸಸ್ಯಗಳು ಅವುಗಳ ತೂಗಾಡುತ್ತಿರುವ ಬೇರಿನ ಮೂಲಕ ಹೀರಿಕೊಳ್ಳುತ್ತವೆ. ಈ ವ್ಯವಸ್ಥೆಯಲ್ಲಿ ಅನೇಕ ಸೊಪ್ಪು ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು ಮತ್ತು ಇದರಲ್ಲಿ ವ್ಯಾಪಕವಾಗಿ ಲೆಟ್ಯುಸ್ ಬೆಳೆಯನ್ನು ಒಂದು ಲಾಭದಾಯಕ ಬೆಳೆಯಾಗಿ ಬೆಳೆಯುತ್ತಾರೆ.

5. ಶುಂಠಿ ಮತ್ತು ಅರಿಶಿಣ ಲಂಬ ಬೇಸಾಯ (Ginger/Turmeric Vertical farming)

ಈ ವಿಧಾನದಲ್ಲಿ ಶುಂಠಿ ಮತ್ತು ಅರಿಶಿಣವನ್ನು ಬೆಳೆಯಲು ಬೇರುಗಳು ಮೊಳಕೆಯೊಡೆಯುವ ವರೆಗೆ ಬೇರುಕಾಂಡದ ತುಂಡನ್ನು ಕಾಂಪೋಸ್ಟ್ನಲ್ಲಿ ನೆಡಬೇಕು. ನಂತರ ಅದನ್ನು ಹೈಡ್ರೋಪೋನಿಕ್ ವ್ಯವಸ್ಥೆಗೆ ನಾಟಿ ಮಾಡಬೇಕು. ಈ ವ್ಯವಸ್ಥೆಯಲ್ಲಿ ಸಸ್ಯಗಳಿಗೆ ಬೇಕಾಗುವಷ್ಟು ಬೆಳಕು ಮತ್ತು ಶಾಖವನ್ನು ಒದಗಿಸಬೇಕು. ಈ ಪದ್ಧತಿಯಲ್ಲಿ ಸಾಧಾರಣ ಪದ್ಧತಿಗಿಂತ 8 ರಿಂದ 10 ಪಟ್ಟು ಹೆಚ್ಚು ಇಳಿವರಿ ಪಡೆಯಬಹುದು.

6. ಡ್ರ್ಯಾಗನ್ ಹಣ್ಣಿನೊಂದಿಗೆ ತರಕಾರಿ ಬೆಳೆಗಳ ಮಿಶ್ರ ಬೇಸಾಯ

ಈ ಪದ್ಧತಿಯಲ್ಲಿ ಡ್ರ್ಯಾಗನ್ ಹಣ್ಣಿನ ಬೆಳೆಯನ್ನು ವಿವಿಧ ತರಕಾರಿ ಬೆಳೆಗಳಾದ ಸಿಹಿ ದೊಣ್ಣೆ ಮೆಣಸಿನಕಾಯಿ ಮತ್ತು ಸೌತೆಕಾಯಿ ಬೆಳೆಗಳನ್ನು ಮಣ್ಣು ರಹಿತವಾಗಿ ಗ್ರೋ ಬ್ಯಾಗ್‌ಗಳಲ್ಲಿ ಬೆಳೆಸಲಾಗುತ್ತದೆ. ಡ್ರ್ಯಾಗನ್ ಹಣ್ಣಿನ ಬೆಳೆಯ ಮಧ್ಯದಲ್ಲಿ ತರಕಾರಿ ಬೆಳೆಗಳನ್ನು ಪರಿಣಾಮಕಾರಿಯಾಗಿ ಬೆಳೆಸಬಹುದು.

7. ಗ್ರೋ ಬ್ಯಾಗ್‌ಗಳಲ್ಲಿ ನಿಖರ ಬೇಸಾಯ ಪದ್ಧತಿ

ಈ ವಿಧಾನದಲ್ಲಿ ಸಿಹಿ ದೊಣ್ಣೆ ಮೆಣಸಿನಕಾಯಿಯನ್ನು ಮಣ್ಣು ರಹಿತವಾಗಿ ಗ್ರೋ ಬ್ಯಾಗ್‌ಗಳಲ್ಲಿ ಬೆಳೆಯಲಾಗುತ್ತದೆ. ಸಿಹಿ ದೊಣ್ಣೆ ಮೆಣಸಿನಕಾಯಿ ಬೆಳೆಗೆ ಬೇಕಾಗುವ ಪೋಷಕಾಂಶವನ್ನು ನಿಖರವಾಗಿ ಸುಧಾರಿತ ತಂತ್ರಜ್ಞಾನದ ಸಹಾಯದಿಂದ ಹನಿ ನೀರಾವರಿ ಪದ್ಧತಿಯಲ್ಲಿ ಒದಗಿಸಲಾಗುತ್ತದೆ. ಈ ಪದ್ಧತಿಯಲ್ಲಿ ನಿರಂತರವಾಗಿ ಪೋಷಕಾಂಶಗಳನ್ನು ಸಸ್ಯದ ಬೇರಿಗೆ ಒದಗಿಸುವುದರಿಂದ ಬೆಳೆಯ ಇಳುವರಿ ಹೆಚ್ಚಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ…

ಮಣ್ಣು ರಹಿತ ಕೃಷಿ ವಿಧಾನ ಅಳವಡಿಸಿಕೊಳ್ಳಲು ಇಚ್ಛಿಸುವ ರೈತರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಜಿಕೆವಿಕೆ) ಸಮಗ್ರ ಮಾಹಿತಿ ಒದಗಿಸುತ್ತದೆ. ಆಸಕ್ತ ರೈತರು ಭೇಟಿ ನೀಡುವ ಮೂಲಕ ಜಲಕೃಷಿ ವಿಧಾನಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.


Spread the love
WhatsApp Group Join Now
Telegram Group Join Now

Leave a comment

error: Content is protected !!