Land Haddubastu Bhoomojini Karnataka : ರೈತರು ಜಮೀನು ಉಳಿಮೆ ಮಾಡುವಾಗ ಸಾಮಾನ್ಯವಾಗಿ ಅಕ್ಕಪಕ್ಕದ ಜಮೀನು ಸಾಧ್ಯವಾದಷ್ಟು ಒತ್ತಿ ಉಳುವುದುಂಟು. ಇದೇ ರೀತಿ ಎರಡೂ ಕಡೆಯವರು ಒತ್ತುವರಿ ಮಾಡಿ ಉಳಿಮೆ ಮಾಡತೊಡಗಿದರೆ ಎರಡೂ ಜಮೀನು ಗಡಿ ಭಾಗದಲ್ಲಿದ್ದ ಹದ್ದುಬಸ್ತು ಕಲ್ಲು ಹೂತು ಹೋಗುತ್ತದೆ ಅಥವಾ ನಾಶವಾಗಿರುತ್ತದೆ. ನಂತರ ನಿಧಾನಕ್ಕೆ ಎರಡೂ ರೈತರ ನಡುವೆ ತಕರಾರು ಶುರುವಾಗಿ, ಜಗಳವಾಗಿ ಮಾರ್ಪಡುವುದುಂಟು.
ಊರಿನ ಪ್ರಮುಖರನ್ನು ಕರೆಯಿಸಿ ತಮ್ಮ ತಮ್ಮಲ್ಲೇ ಹೊಂದಾಣಿಕೆ ಮಾಡಿಕೊಂಡರೆ ಇದು ಸಮಸ್ಯೆಯೇ ಅಲ್ಲ. ಬಹುತೇಕ ಸಂದರ್ಭದಲ್ಲಿ ಊರಿನ ಪ್ರಮುಖರ ಕಿವಿಗೆ ವಿಚಾರ ತಲಯಪುವ ಮೊದಲೇ ಆಗಬಾರದ್ದು ಆಗಿ ಹೋಗಿರುತ್ತದೆ. ಹೀಗಾದಾಗ ಎರಡೂ ಕುಟುಂಬಗಳ ನೆಮ್ಮದಿ ಹಾಳು. ಇಬ್ಬರ ನಡುವಿನ ವಿಶ್ವಾಸಕ್ಕೂ ಧಕ್ಕೆ!
ಇನ್ನು ಕೆಲವು ಸಂದರ್ಭದಲ್ಲಿ ಬಲಾಢ್ಯರು ಬಡಪಾಯಿ ರೈತನ ಜಮೀನು ಒತ್ತುವರಿ ಮಾಡಿ, ತಮ್ಮ ಪಾಲಿನ ಅಥವಾ ತಾವು ಖರೀದಿಸಿದ ಭೂಮಿ ಕನ್ವರ್ಷನ್ (Land conversion) ಮಾಡಿ ಬಡಾವಣೆ ನಿರ್ಮಾಣ ಮಾಡುವ ಸಂದರ್ಭದಲ್ಲೂ ಈ ಸಮಸ್ಯೆ ತಲೆದೋರುವುದುಂಟು. ಆಗ ಬಡ ರೈತ ಊರ ಪ್ರಮುಖರಲ್ಲೂ ಮೊರೆ ಇಡಲಾಗದೇ, ಕೋರ್ಟು ಕಚೇರಿಗೂ ಅಲೆಯಲಾಗದೇ ಬಲಾಢ್ಯರ ಒತ್ತಡಕ್ಕೆ ತನ್ನ ಜಮೀನು ಒತ್ತುವರಿಯನ್ನು ಸಹಿಸಿಕೊಂಡು ಇರಬೇಕಾಗುತ್ತದೆ.
ಹಾಗಾದರೆ ಇದಕ್ಕೇನು ಪರಿಹಾರ? ಯಾವುದೇ ತಗಾದೇ ತೆಗೆಯದೇ, ಪರಸ್ಪರ ಬಡಿದಾಡಿಕೊಳ್ಳದೇ, ನ್ಯಾಯ ಸಮ್ಮತವಾಗಿ ಒತ್ತುವರಿಯಾದ ಜಮೀನನ್ನು ಸುಲಭವಾಗಿ ತೆರವುಗೊಳಿಸುವುದು ಹೇಗೆ? ಖಂಡಿತ ಸಾಧ್ಯವಿದೆ. ಬಹಳಷ್ಟು ರೈತರಿಗೆ ಇದು ಗೊತ್ತಿದೆಯಾದರೂ ಅನೇಕರಿಗೆ ಈ ಬಗ್ಗೆ ಮಾಹಿತಿ ಕೊರತೆ ಇದೆ.
ಹದ್ದುಬಸ್ತು ಎಂದರೇನು?
ಒತ್ತುವರಿಯಾದ ಜಮೀನು ತೆರವುಗೊಳಿಸಿ ಕರಾರುವಾಕ್ಕಾಗಿ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದನ್ನು ‘ಹದ್ದುಬಸ್ತು’ ಎಂದು ಕರೆಯುತ್ತಾರೆ. ಪ್ರತಿ ಜಮೀನಿಗೂ ಹದ್ದುಬಸ್ತು ಇದ್ದೇ ಇರುತ್ತೆ. ಆದರೆ ಅದು ಕಾಲಾಂತರದಲ್ಲಿ ಅಳಿಸಿ ಹೊಗಿರುವುದುಂಟು. ಈ ಸಂಬ೦ಧ ಆಧಾರ್ ಕಾರ್ಡ್, ಪಹಣಿಯೊಂದಿಗೆ ನಿಮ್ಮ ಹೋಬಳಿಯ ನಾಡಕಚೇರಿಗೆ ಭೇಟಿ ಮಾಡಿ ಹದ್ದುಬಸ್ತು ಸರ್ವೆಗೆ ಹಣ ಪಾವತಿಸಿ ಅರ್ಜಿ ಸಲ್ಲಸಿದರೆ ಭೂಮಾಪಕರು ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ಪುನಃ ಜಮೀನು ಅಳತೆ ಮಾಡಿ ನಾಶವಾಗಿ ಹೋಗಿರುವ ಗಡಿ ಭಾಗವನ್ನು ಪತ್ತೆ ಹಚ್ಚಿ ನಿಖರ ಗುರುತು ಮಾಡಿಕೊಡುತ್ತಾರೆ.
ಇದರಿಂದ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ? ಎಷ್ಟು ಪ್ರದೇಶ ಒತ್ತುವರಿಯಾಗಿದೆ? ಯಾರು ಒತ್ತುವರಿ ಮಾಡಿಕೊಂಡಿದ್ದಾರೆ? ಎಂಬುವುದು ಪತ್ತೆಯಾಗುತ್ತದೆ. ಮಾತ್ರವಲ್ಲ ಒತ್ತುವರಿಯಾದ ಆ ಜಾಗವನ್ನು ಒಳಗೊಂಡು ನಿಖರವಾದ ಹೊಸ ಗಡಿ ಗುರುತು ಸಿಗುತ್ತದೆ. ಒಂದು ವೇಳೆ ಈ ಅಳತೆಯಿಂದ ಅರ್ಜಿದಾರರಿಗೆ ಅಥವಾ ಪಕ್ಕದ ಜಮೀನಿನವರಿಗೆ ಸಮಾಧಾನವಾಗಿಲ್ಲ ಎಂದರೆ ಮತ್ತೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ.
ಅರ್ಜಿ ಹೇಗೆ ಸಲ್ಲಿಸಬೇಕು?
ಮುಖ್ಯವಾಗಿ ನಿಮ್ಮ ಜಮೀನು ಪಹಣಿಯಲ್ಲಿ ಇರುವುದಕ್ಕಿಂತಲೂ ಕಡಿಮೆ ಇದೆ, ಪಕ್ಕದವರು ಒತ್ತುವರಿ ಮಾಡಿದ್ದಾರೆ ಎಂಬ ಗುಮಾನಿ ನಿಮಗಿದ್ದರೆ ಅವರೊಂದಿಗೆ ಕ್ಯಾತೆ ತೆಗೆಯದೇ ಅರ್ಜಿ ಸಲ್ಲಿಸಿ ನಿಮ್ಮ ಅನುಮಾನ ಪರಿಹರಿಸಿಕೊಳ್ಳಬಹುದು. ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ರೈತರು ತಮ್ಮ ಆಧಾರ್ ಕಾರ್ಡ್ (Aadhar), ಇತ್ತೀಚಿನ ಪಹಣಿಯೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಬೇಕು.
ಅರ್ಜಿ ನಮೂನೆಯಲ್ಲಿ ಮುಖ್ಯವಾಗಿ ಚೆಕ್ಕುಬಂದಿ ವಿವರ, ನಿಮ್ಮ ಜಮೀನಿನ ಅಕ್ಕಪಕ್ಕದವರ ಹೆಸರು, ಅವರ ಮೊಬೈಲ್ ನಂಬರ್ ಹಾಗೂ ವಿಳಾಸವನ್ನು ಭರ್ತಿ ಮಾಡಿ ನಿಮ್ಮ ಹೋಬಳಿಯಲ್ಲಿರುವ ನಾಡಕಚೇರಿ (Nadakacheri) ಅಥವಾ ತಾಲೂಕು ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ರಸೀದಿ ಪಡೆದುಕೊಳ್ಳಬೇಕು.
ಸರ್ವೆಗೆ ಶುಲ್ಕವೆಷ್ಟು?
ಈ ಸಂದರ್ಭದಲ್ಲಿ ಸರ್ವೇ ಶುಲ್ಕ ಪಾವತಿಸಬೇಕಾಗುತ್ತದೆ. ಈ ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಸರ್ವೆ ಅಥವಾ ಹಿಸ್ಸಾ ಸರ್ವೆ ನಂಬರಿಗೆ ಜಮೀನುದಾರರ ಅರ್ಜಿ ಶುಲ್ಕ 35 ರೂಪಾಯಿ ಮಾತ್ರ ಪಾವತಿಸಲಾಗುತಿತ್ತು. ಆದರೆ, ಈಗ ನಗರ ಹಾಗೂ ಗ್ರಾಮೀಣ ಪ್ರದೇಶಗಳೆಂದು ಪ್ರತ್ಯೇಕಿಸಿ 4,000 ರೂಪಾಯಿ ವರೆಗೆ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ ಎರಡು ಎಕರೆ ವರೆಗೆ 1,500 ರೂಪಾಯಿ ಮತ್ತು ಎರಡು ಎಕರೆಗಿಂತ ಹೆಚ್ಚಾದರೆ, ಪ್ರತಿ ಎಕರೆಗೆ ಹೆಚ್ಚುವರಿ 400 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
ಹೀಗೆ ಸರ್ವೇ ಶುಲ್ಕದ (Survey fee) ಸಮೇತ ಅರ್ಜಿ ಸಲ್ಲಿಸಿದ ನಂತರ, ನಿಮ್ಮ ಅರ್ಜಿಯನ್ನು ಭೂ ಮಾಪಕರಿಗೆ ವರ್ಗಾವಣೆ ಮಾಡಲಾಗುತ್ತದೆ. ಅರ್ಜಿದಾರರಿಗೆ ಹಾಗೂ ಪಕ್ಕದ ಜಮೀನುದಾರರು ಇಬ್ಬರಿಗೂ ಭೂಮಾಪಕರು ಮೊದಲೇ ನೋಟಿಸ್ ಕೊಟ್ಟು ದಿನಾಂಕವನ್ನು ನಿಗದಿಪಡಿಸುತ್ತಾರೆ. ಅವರು ಹೇಳಿರುವ ದಿನಾಂಕದ೦ದು ಅರ್ಜಿದಾರರ ಮತ್ತು ಪಕ್ಕದ ಜಮೀನುದಾರರ ಸಮ್ಮುಖದಲ್ಲಿ ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ನಡೆಯುತ್ತದೆ. ಅಳತೆ ಕಾರ್ಯ ಮುಗಿದ ನಂತರ ಅರ್ಜಿದಾರ ಬಾಂದುಕಲ್ಲುಗಳನ್ನು ಹಾಕಿಕೊಳ್ಳಬೇಕಾಗುತ್ತದೆ.
ನ್ಯಾಯಾಲಯದ ಮೊರೆ
ಹಾಗೊಂದು ವೇಳೆ, ಪಕ್ಕದ ಜಮೀನಿನ ಮಾಲೀಕರು ಒತ್ತುವರಿ ಬಿಡಲು ಒಪ್ಪದೇ ಇದ್ದಲ್ಲಿ, ಸಿವಿಲ್ ನ್ಯಾಯಾಲಯದ (Civil Court) ಮೊರೆ ಹೋಗಬೇಕಾಗುತ್ತದೆ. ಆಗ ಹದ್ದುಬಸ್ತು ನಕ್ಷೆ ಹಾಗೂ ವರದಿ ನ್ಯಾಯಾಲಯದಲ್ಲಿ ಪ್ರಮುಖ ಆಧಾರವಾಗಿರುತ್ತದೆ. ಹಾಗೊಂದು ವೇಳೆ ಏನಾದರೂ ಅಕ್ಕಪಕ್ಕದ ಜಮೀನಿನವರು ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದಲ್ಲಿ ಅಳತೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಕೆಲವು ಸಲ ಅಳತೆ ಕಾರ್ಯ ಸಮಯದಲ್ಲಿ ಶಾಂತಿ ಭಂಗ ಉಂಟಾಗಬಹುದು ಎಂದು ಮೊದಲೇ ಗೊತ್ತಿದ್ದರೆ ಸೂಕ್ತ ಪೋಲಿಸ್ ಬಂದೋಬಸ್ತಿಗೆ ಅರ್ಜಿ ಸಲ್ಲಿಸಬೇಕು. ನ್ಯಾಯಾಲಯದಲ್ಲಿ ಹದ್ದುಬಸ್ತಿನ ನಕ್ಷೆ, ಪಹಣಿ ಎಂಆರ್ (Mutation Register) ನೋಂದಣಿ ಪತ್ರಗಳಿಗೆ ವಕೀಲರ ಮೂಲಕ ಅರ್ಜಿ ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು. ಪೋಲಿಸರ ಸಮಕ್ಷಮ ಒತ್ತುವರಿ ತೆರೆವುಗೊಳಿಸುವುದಕ್ಕೆ ಎವಿಕ್ಷನ್ ಆರ್ಡರ್ ಅಥವಾ ಪೊಟೆಕ್ಷನ್ ಆರ್ಡರ್ ತೆಗೆದುಕೊಳ್ಳಲು ನ್ಯಾಯಾಲಯವು ಆದೇಶ ನೀಡುತ್ತದೆ.
1 thought on “Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…”