ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಯಲ್ಲಿ ಈ ಸೂತ್ರ ಪಾಲಿಸಿ ಹೆಚ್ಚಿನ ಆದಾಯ ಗಳಿಸಿ Sheep, Goat and Dairy Farming Success formulas

WhatsApp Group Join Now
Telegram Group Join Now
Spread the love

Sheep, Goat and Dairy Farming Success formulas : ಪಶುಪಾಲನೆಯು (Animal husbandry) ಅನಾದಿ ಕಾಲದಿಂದಲೂ ಕೃಷಿಯೊಂದಿಗೆ ಮಾನವನ ಪ್ರಮುಖ ಉದ್ಯೋಗವಾಗಿದೆ. ಹಾಲು, ಮಾಂಸ, ಮೊಟ್ಟೆ, ಉಣ್ಣೆ, ಗೊಬ್ಬರ ಸೇರಿದಂತೆ ಮಾನವ ಸಮಾಜಕ್ಕೆ ಪಶುಪಾಲನೆಯ ಕೊಡುಗೆ ಅಪಾರ. ಇಂದಿಗೂ ಸಹ ಪಶುಪಾಲನೆಯು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಕಾಮಧೇನುವಾಗಿದೆ. ಹೊಸದಾಗಿ ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯುಳ್ಳವರಿಗೆ ಮಾಹಿತಿ ಇಲ್ಲಿದೆ…

ಹೈನುಗಾರಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳು Dairy Farming

ನಿಮ್ಮ ಊರಿನಲ್ಲಿ ಈಗಾಗಲೇ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿ ಇದ್ದರೆ ಒಂದು ಮಿಶ್ರತಳಿ ಹಸು ಖರೀದಿಸಿ ಹೈನುಗಾರಿಕೆಯನ್ನು ಆರಂಭಿಸಿ. ನಂತರ ನಿಧಾನವಾಗಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿ. ನಿಮ್ಮ ಭಾಗದಲ್ಲಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದ್ದರೆ ಒಂದು ಎಮ್ಮೆಯೊಂದಿಗೆ ಹೈನುಗಾರಿಕೆ ಆರಂಭಿಸಿ ತುಪ್ಪವನ್ನು ಮಾಡಲು ಪ್ರಾರಂಭಿಸಿ. ನಂತರ ಅನುಭವದೊಂದಿಗೆ ಹೆಚ್ಚಿನ ಎಮ್ಮೆಗಳನ್ನು ಸಾಕಾಣಿಕೆ ಮಾಡಿ.

ಜಾನುವಾರು ಖರೀದಿಗೆ ಮುನ್ನ ನುರಿತ ಪಶುವೈದ್ಯರು ಹಾಗೂ ಈಗಾಗಲೇ ಹೈನುಗಾರಿಕೆ ಮಾಡುತ್ತಿರುವ ರೈತರ ಸಲಹೆಯನ್ನು ಪಡೆಯಿರಿ. ಒಂದು ವೇಳೆ ಮೊದಲ ಬಾರಿಗೆ ಪಶುಪಾಲನೆಯನ್ನು ಮಾಡುತ್ತಿದ್ದರೆ ಈಗಾಗಲೇ ಹೈನುಗಾರಿಕೆ ಮಾಡುತ್ತಿರುವ ರೈತರ ಮನೆಯಲ್ಲಿ ಒಂದು ವಾರ ಕೆಲಸ ಮಾಡಿ. ಇದು ನಿಮಗೆ ಒಳ್ಳೆಯ ತರಬೇತಿ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಜಾನುವಾರುಗಳನ್ನು ಆದಷ್ಟು ಸ್ಥಳೀಯ ರೈತರಿಂದ ಖರೀದಿಸಿ. ನಂತರ ಪಶುವೈದ್ಯರಿಂದ ಆರೋಗ್ಯವನ್ನು ಪರೀಕ್ಷಿಸಿ ಹಾಗೂ ಸಾಧ್ಯವಾದರೆ ವಿಮೆ ಮಾಡಿಸುವುದು ಸೂಕ್ತ.

ಇದನ್ನೂ ಓದಿ: ಒಂದೇ ಜಮೀನಿನಲ್ಲಿ ಕೃಷಿ, ಪಶುಪಾಲನೆ, ಮೀನುಗಾರಿಕೆ | ನಿರಂತರ ಆದಾಯ ಗಳಿಕೆಯ ಸಂಯೋಜಿತ ಕೃಷಿ ಪದ್ಧತಿ… Benefits of Integrated Farming

ಕುರಿ ಹಾಗೂ ಆಡು ಸಾಕಾಣಿಕೆ Sheep and Goat Farming

ನಿಮ್ಮ ಭಾಗದಲ್ಲಿ ಮಾಂಸದ ಬೇಡಿಕೆಯನ್ನು ಆಧರಿಸಿ ಕುರಿ-ಆಡು ಸಾಕಾಣಿಕೆಯನ್ನು ಪ್ರಾರಂಭ ಮಾಡಿ. ದಕ್ಷಿಣ ಕರ್ನಾಟಕ ಭಾಗದಲ್ಲಿ ಕುರಿ ಮಾಂಸಕ್ಕೆ ಭಾರಿ ಬೇಡಿಕೆಯಿದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆಡಿನ ಮಾಂಸಕ್ಕೆ ಬೇಡಿಕೆ ಇದೆ. ನಿಮ್ಮ ಸ್ಥಳೀಯ ಮಾರುಕಟ್ಟೆ ಬೇಡಿಕೆ ಅನುಗುಣವಾಗಿ ಪಾಲನೆ ಮಾಡಿ. 5 ಗರ್ಭಧರಿಸಿದ ಕುರಿ ಅಥವಾ ಆಡುಗಳಿಂದ ಸಾಕಾಣಿಕೆಯನ್ನು ಪ್ರಾರಂಭ ಮಾಡಿ.

ನಂತರ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆ 100 ದಾಟುತ್ತದೆ. ನಿಮ್ಮ ಊರಿನ ಸುತ್ತಮುತ್ತ ಗುಡ್ಡಗಾಡು ಪ್ರವೇಶಗಳು ಹೆಚ್ಚಾಗಿದ್ದರೆ ಆವಾಗ ಆಡು ಸಾಕಾಣಿಕೆ ಹೆಚ್ಚು ಸೂಕ್ತ. ಕೊಟ್ಟಿಗೆ ಪದ್ಧತಿಯಲ್ಲಿ ಪಾಲನೆ ಮಾಡಬೇಕಾದರೆ ಕುರಿ ಸಾಕಾಣಿಕೆಯು ಸೂಕ್ತ. ಮೊದಲ ಸಲ ಸಾಕುವಾಗ ಸ್ಥಳೀಯ ತಳಿಗಳನ್ನು ಸಾಕಣೆ ಮಾಡಿ. ದೊಡ್ಡ ದೊಡ್ಡ ತಳಿಗಳ ಪಾಲನೆ ಮಾಡುವ ಸಾಹಸ ಬೇಡ.

ಸಾಕಿದ ಕುರಿ ಹಾಗೂ ಆಡುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದು. ಈಗಾಗಲೇ ಕುರಿ ಹಾಗೂ ಆಡುಗಳು ರೈತರ ಎಟಿಎಂ ಎಂದೇ ಪ್ರಖ್ಯಾತಿ ಪಡೆದಿವೆ. ಹಣದ ಅವಶ್ಯಕತೆ ಇದ್ದಾಗ ಸುಲಭವಾಗಿ ಮಾರಾಟ ಮಾಡಿ ಹಣ ಪಡೆಯಬಹುದಾಗಿದೆ. ದಿನದಿಂದ ದಿನಕ್ಕೆ ಕುರಿ ಹಾಗೂ ಆಡಿನ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತಿಚಿಗೆ ಆಡಿನ ಹಾಲು ಸಹ ಅಧಿಕ ಬೇಡಿಕೆ ಹೊಂದಿದೆ.

ಇದನ್ನೂ ಓದಿ: ರೈತರ ಹಾಲಿನ ಬೆಲೆಯಲ್ಲಿ 1.5 ರೂಪಾಯಿ ಕಡಿತ | ಹಾಲು ಒಕ್ಕೂಟದ ಆದೇಶ RBKMUL Farmers Milk Price Reduction

ಹೋರಿಗಳ ಸಾಕಾಣಿಕೆ

ದೇವಣಿ, ಕಿಲ್ಲಾರಿ, ಅಮೃತ್ ಮಹಲ್, ಹಳ್ಳಿಕಾರ್, ಕೃಷ್ಣ ವ್ಯಾಲಿ ಸೇರಿದಂತೆ ದೇಸಿ ತಳಿಗಳ ಎರಡು ವರ್ಷದ ಹೋರಿಗಳ ಬೆಲೆ 50 ಸಾವಿರಕ್ಕಿಂತ ಹೆಚ್ಚು ಹಾಗೂ ಒಂದು ಜೋಡಿ ಎತ್ತಿನ ಬೆಲೆ ಒಂದೂವರೆ ಲಕ್ಷಕ್ಕಿಂತ ಹೆಚ್ಚು. ಒಂದು ವರ್ಷದಲ್ಲಿ 10 ಗಂಡು ಕರುಗಳನ್ನು ಸಾಕಿದರೆ ಸರಾಸರಿ 4 ರಿಂದ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಅವುಗಳನ್ನು ಜೋಡಿಯಾಗಿ ಮಾರಾಟ ಮಾಡಿದರೆ ಲಾಭ ಇನ್ನು ಹೆಚ್ಚು.

ಅದೇ ರೀತಿ ಮಿಶ್ರ ತಳಿಗಳಾದ ಜರ್ಸಿ, ಹೆಚ್‌ಎಫ್‌ಗಳ ಹೆಣ್ಣು ಕರುಗಳನ್ನು ಸಾಕಿ ನಂತರ ಅವುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಿ ಗರ್ಭ ಧರಿಸಿದ ನಂತರ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದಾಗಿದೆ. ಕಾಲಕಾಲಕ್ಕೆ ಜಂತು ನಾಶಕ ಔಷಧಿ ಹಾಗೂ ವಿವಿಧ ರೋಗಗಳ ವಿರುದ್ಧ ಲಸಿಕೆಗಳನ್ನು ಹಾಕಿಸುವುದು ಬಹಳ ಮುಖ್ಯ. ಪ್ರಗತಿಪರ ರೈತರ ಹಾಗೂ ಪಶು ವೈದ್ಯರೊಂದಿಗೆ ನಿಮ್ಮ ಒಡನಾಟ ಇರಲಿ.

Sheep, Goat and Dairy Farming Success formulas

ಇದನ್ನೂ ಓದಿ: ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ | ಸೆಪ್ಟೆಂಬರ್ 15ರ ವರೆಗೂ ಅವಕಾಶ Date extension for Development Corporation Schemes

ನಾಟಿ ತಳಿ ಕೋಳಿ ಸಾಕಾಣಿಕೆ Poultry Farming

ಇಂದು ವಿವಿಧ ತಳಿಗಳ ಮಾಂಸದ ಕೋಳಿಯು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ಇಂದಿಗೂ ದೇಶಿ ತಳಿಯ ಕುಕ್ಕುಟಗಳು ಗ್ರಾಹಕರಿಂದ ತಮ್ಮದೇ ಆದ ಬೇಡಿಕೆಯನ್ನು ಹೊಂದಿವೆ. ಆದ್ದರಿಂದ ಮನೆಯ ಹಿತ್ತಲಲ್ಲಿ 15 ರಿಂದ 20 ಕೋಳಿಗಳು ಯಾವಾಗಲೂ ನಿಮ್ಮ ಬಳಿ ಇರಲಿ.

ಅಗತ್ಯ ಬಿದ್ದಾಗ ಮಾರಾಟ ಮಾಡಿ ದುಡ್ಡನ್ನು ಪಡೆಯಬಹುದಾಗಿದೆ. ಪಶು ಪಾಲನೆಯೊಂದಿಗೆ ತೋಟಗಾರಿಕೆ, ರೇಷ್ಮೆ ಸಾಕಾಣಿಕೆ, ಜೇನು ಕೃಷಿ, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಸೇರಿದಂತೆ ಆಯಾ ಪ್ರದೇಶದ ಅನುಗುಣವಾಗಿ ಹಲವಾರು ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ಸಮಗೃ ಕೃಷಿ ಮೂಲಕ ಅಧಿಕ ಲಾಭ ಪಡೆಯಬಹುದಾಗಿದೆ.

ಇದನ್ನೂ ಓದಿ: ಸಣ್ಣ ರೈತರಿಗೆ ಗಂಗಾಕಲ್ಯಾಣ ನೀರಾವರಿ ಸೌಲಭ್ಯಕ್ಕೆ ₹4.25 ಲಕ್ಷ ಆರ್ಥಿಕ ನೆರವು | ಆಗಸ್ಟ್ 30ರೊಳಗೆ ಅರ್ಜಿ ಹಾಕಿ… Karnataka Ganga Kalyana Scheme 2024

ಹೊಸದಾಗಿ ಪಶುಪಾಲನೆ ಮಾಡುವವರಿಗೆ ಕಿವಿಮಾತು

ಬ್ಯಾಂಕ್ ಲೋನ್ ಅನ್ನು ನಂಬಿ ಪಶುಪಾಲನೆ ಮಾಡುವ ಸಾಹಸ ಬೇಡ. ಲೋನ್ ಸಿಕ್ಕರೆ ಒಳ್ಳೆಯದು. ಸಿಗದೇ ಇದ್ದರೂ ಸಹ ಕಡಿಮೆ ಬಂಡವಾಳದಿAದ ಪಾಲನೆ ಪ್ರಾರಂಭಿಸಲು ನಿಮ್ಮ ಸಂಕಲ್ಪ ಇರಲಿ.

ನಿಮ್ಮ ಭಾಗದಲ್ಲಿ ಬೇಡಿಕೆ ಇರುವ ಪಶು ಉತ್ಪನ್ನಗಳ ಬಗ್ಗೆ ನಿಮಗೆ ಮಾಹಿತಿ ಇರಲಿ. ನಿಮ್ಮ ಭಾಗದ ಮಾರುಕಟ್ಟೆಗಳಲ್ಲಿ ಅಡ್ಡಾಡಿ ಪಶು ಪಾಲಕರಿಂದ ಹಾಗೂ ಗ್ರಾಹಕರಿಂದ ಬೇಡಿಕೆ ಹಾಗೂ ಪೂರೈಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ನಿಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗೆ ಭೇಟಿ ಮಾಡಿ ಪಶುವೈದ್ಯರೊಂದಿಗೆ ಹಾಗೂ ಪ್ರಗತಿಪರ ರೈತರೊಂದಿಗೆ ಚರ್ಚಿಸಿ ಸಾಧಕ-ಬಾಧಕಗಳ ಕುರಿತು ಅವಲೋಕಿಸಿ ನಂತರ ನಿಮಗೆ ಸಾಧ್ಯವಾಗುವ ಮಾರುಕಟ್ಟೆಯಲ್ಲಿ ಅದಕ್ಕೆ ಬೇಡಿಕೆ ಹೊಂದಿರುವ ಪಶುಪಾಲನೆಯನ್ನು ಆರಂಭಿಸಿ.

ಕಡಿಮೆ ಬಂಡವಾಳದಿ೦ದ ಪ್ರಾರಂಭಿಸಿ, ನಂತರ ನಿಧಾನವಾಗಿ ಪ್ರಾಣಿಗಳ ಸಂಖ್ಯೆ ಹೆಚ್ಚಿಸುತ್ತಾ ಹೋಗಿ. ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಮಾಡುವ ಉದ್ದೇಶ ಬೇಡ.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಜಮೆಗೆ ಕೃಷಿ ಇಲಾಖೆ ಸೂಚನೆ | ಕೂಡಲೇ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ PM Kisan Samman Nidhi Mobile Updation

ಸರ್ಕಾರದ ಸಹಾಯಧನದ ಸಲುವಾಗಿ ಪಶುಪಾಲನೆ ಮಾಡಬೇಡಿ. ನಿಮ್ಮ ಪಶುಪಾಲನೆ ಸಫಲವಾದರೆ ಎಲ್ಲಾ ರೀತಿಯ ಸಹಾಯ ಧನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ.

ಆಳುಗಳ ಮೇಲೆ ಯಾವುದೇ ರೀತಿಯ ಅವಲಂಬನೆ ಬೇಡ. ಅವರು ಬರದೆ ಇದ್ದರೂ ಸಹ ಪ್ರಾಣಿಗಳ ದೈನಂದಿನ ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯ ನಿಮ್ಮ ಬಳಿ ಇರಲಿ.

ಪ್ರಾಣಿಗಳಿಗೆ ರೋಗಗಳು ಬಂದಾಗ ಪಶು ವೈದ್ಯರನ್ನು ಕಾಣುವ ಬದಲು, ಜಾನುವಾರು ಖರೀದಿ ಮಾಡಿದ ನಂತರ ಪಶುವೈದ್ಯರಿಂದ ಪರೀಕ್ಷಿಸಿ ನಂತರ ಅವರ ಸಲಹೆ ಮೇರೆಗೆ ಕಾಲ ಕಾಲಕ್ಕೆ ತಕ್ಕಂತೆ ಜಂತು ನಾಶಕ ಔಷಧಿ ಹಾಗೂ ಲಸಿಕೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮಾಡಿಸುವ ಮೂಲಕ ರೋಗಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಬಹುದು.

ಖರೀದಿ ಮಾಡಿದ ನಂತರ ಜಾನುವಾರುಗಳಿಗೆ ವಿಮೆ ಮಾಡಿಸುವುದು ಅತಿ ಅವಶ್ಯಕ. ಇದರಿಂದಾಗಿ ನೀವು ಹಾಕಿದ ಬಂಡವಾಳ ಸುರಕ್ಷಿತವಾಗಿರುತ್ತದೆ.ಜಾನುವಾರು ಖರೀದಿ ನಂತರ ಚಿಕಿತ್ಸೆ, ಜಂತುನಾಶಕ ಔಷಧಿ, ಲಸಿಕೆ ವಿವರಗಳ ದಾಖಲಾತಿ ಇಡುವುದು ಅವಶ್ಯಕ.

ಕೊಟ್ಟಿಗೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವುದು ಬೇಡ. ಆದಷ್ಟು ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದ ಕೊಟ್ಟಿಗೆಯನ್ನು ನಿರ್ಮಿಸಿ. ನಂತರ ಲಾಭವಾದ ಬಳಿಕ ದೊಡ್ಡ ಕೊಟ್ಟಿಗೆಯನ್ನು ಕಟ್ಟಬಹುದು.

ಸ್ಥಳೀಯವಾಗಿ ಮಾರುಕಟ್ಟೆ ಇರದ ಪಶು ಉತ್ಪನ್ನಗಳ ಉತ್ಪತ್ತಿ ಅಥವಾ ಸಾಕಾಣಿಕೆ ಬೇಡ. ಹಬ್ಬದ ದಿನಗಳಲ್ಲಿ ತುಪ್ಪಕ್ಕೆ ಬಹಳ ಬೇಡಿಕೆ ಇದೆ. ಅದೇ ರೀತಿ ಬಕ್ರೀದ್, ದಸರಾ ಹಾಗೂ ಯುಗಾದಿ ಹಬ್ಬದ ಸಮಯದಲ್ಲಿ ಮಾಂಸಕ್ಕೆ ಭಾರಿ ಬೇಡಿಕೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಅಧಿಕ ಲಾಭ ಗಳಿಸಬಹುದಾಗಿದೆ.

ಪ್ರಾಣಿಗಳ ಗೊಬ್ಬರ ಸಹ ಒಂದು ಆದಾಯದ ಮೂಲವಾಗಿದ್ದು, ಪ್ರತಿದಿನ ಜಾನುವಾರಗಳ ಕೊಟ್ಟಿಗೆ ಸ್ವಚ್ಛ ಮಾಡಿ ಅವುಗಳ ಸಗಣಿ ಅಥವಾ ಹಿಕ್ಕೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವ ಮೂಲಕ ಗೊಬ್ಬರದ ಉತ್ಪಾದನೆ ಮಾಡಬಹುದಾಗಿದೆ. ದೇಶಿ ತಳಿಯ ಹಸುಗಳ ಗಂಜಲಕ್ಕೂ ಸಹ ಬಹಳ ಬೇಡಿಕೆ ಇದೆ.

ಇದನ್ನೂ ಓದಿ: ಕುರಿ-ಮೇಕೆ ಸೊಸೈಟಿ ಸ್ಥಾಪಿಸಿ 5 ಲಕ್ಷ ಪ್ರೋತ್ಸಾಹ ಧನ ಪಡೆಯಿರಿ Sheep and Goat Society Prostaha Dhana

ಹಸುಗಳ ಸೆಗಣಿಯ ಬೆರಣಿಗೂ ಸಹ ಧಾರ್ಮಿಕ ಕಾರ್ಯಗಳಲ್ಲಿ ಬಹಳ ಬೇಡಿಕೆ ಇದೆ. ಬೇಡಿಕೆಗನುಗುಣವಾಗಿ ನಿರಂತರವಾಗಿ ಪೂರೈಕೆ ಮಾಡಿ ಅಧಿಕ ಲಾಭ ಗಳಿಸಬಹುದಾಗಿದೆ. ದೇಶಿ ತಳಿಯ ಉತ್ಪನ್ನಗಳನ್ನು ಸಾವಯುವ ಮಳಿಗೆಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದಾಗಿದೆ.

ಪ್ರಾಣಿಗಳ ಆರೋಗ್ಯದ ಕುರಿತು ಯಾವುದೇ ರೀತಿಯ ಅಸಡ್ಡೆ ಬೇಡ. ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸವಾದರೂ ಕೂಡ ಕೂಡಲೇ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ. ಮನೆಮದ್ದುಗಳು ಬಳಸುವಾಗಲೂ ಸಹ ತಜ್ಞ ಪಶುವೈದ್ಯರ ಸಲಹೆ ಮೇರೆಗೆ ಬಳಸಿ.

ಮೊದಲು ಮೇವು ಸಂಗ್ರಹಿಸಿ ನಂತರ ಜಾನುವಾರುಗಳ ಖರೀದಿ ಮಾಡಬೇಕು. ಮನೆಯ ಹಿತ್ತಲಲ್ಲಿ ಹಾಗೂ ಹೊಲಗಳಲ್ಲಿ ಮೇವು ಬೆಳೆಯಬೇಕು. ಖರೀದಿ ಮಾಡಿದ ಮೇವಿನ ಮೇಲೆ ಯಾವುದೇ ರೀತಿಯಲ್ಲಿ ಅವಲಂಬಿತರಾಗಬೇಡಿ. ನಿಮ್ಮ ಸ್ವಂತ ಮೇವು ಉತ್ಪಾದನೆ ಇರಲಿ.

ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆ, ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಕಚೇರಿ, ವಿವಿಧ ಕೃಷಿ ಸಂಬAಧಿತ ಸ್ವಯಂ ಸೇವಾ ಸಂಘಗಳು, ಕೃಷಿ ಮಹಾವಿದ್ಯಾಲಯ, ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

| ಡಾ. ಅಣ್ಣಾರಾವ್ ಪಾಟೀಲ್, ಲೇಖಕರು ಹಿರಿಯ ಪಶುವೈದ್ಯಾಧಿಕಾರಿ

ಇದನ್ನೂ ಓದಿ: Land Haddubastu Bhoomojini Karnataka : ಜಮೀನು ಒತ್ತುವರಿಯಾದರೆ ರೈತರು ಹದ್ದುಬಸ್ತು ಮಾಡಿಕೊಳ್ಳುವ ವಿಧಾನ | ತಜ್ಞರ ಕಾನೂನಾತ್ಮಕ ಸಲಹೆ ಇಲ್ಲಿದೆ…


Spread the love
WhatsApp Group Join Now
Telegram Group Join Now

1 thought on “ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆಯಲ್ಲಿ ಈ ಸೂತ್ರ ಪಾಲಿಸಿ ಹೆಚ್ಚಿನ ಆದಾಯ ಗಳಿಸಿ Sheep, Goat and Dairy Farming Success formulas”

Leave a comment

error: Content is protected !!